Thursday, March 21, 2013

ವಿಶ್ವ ಸೃಷ್ಟಿಯಲಿ ದೇವರು, ಧರ್ಮ

ಪ್ರಾಚೀನ ಕಾಲದಿಂದಲೂ ಮಾನವನಿಗೆ ಒಳಿತು ಕೆಡುಕಿನ ಪ್ರಶ್ನೆಯೆ ಕಾಡಿದ ಸಂದರ್ಭದಲ್ಲೆಲ್ಲಾ ಅವನ ಧರ್ಮ ಕರ್ಮಗಳೇ ಉತ್ತರಿಸಿವೆ. ಧರ್ಮವು ನೆಮ್ಮದಿಗೆ ದಾರಿ ಕಾಣಿಸಿದರೆ, ಕರ್ಮಕೈಂಕರ್ಯದಲ್ಲಿ ಜೀವಿತ ಸಾರ್ಥಕ್ಯ ಕಂಡಿದೆ. ಸತ್ಕರ್ಮಫಲಗಳ ಮೂಲವೇ ಧರ್ಮ. ಧರ್ಮವು ದ್ವಿಮುಖಿ. ಒಂದು ಅಂತರ್ಮುಖಿ. ಇನ್ನೊಂದು ಬಹಿರ್ಮುಖಿ. ಅಂತರ್ಮುಖಿಗೆ ಜೀವಧರ್ಮ. ಬಹಿರ್ಮುಖಿಗೆ ಮಾನವ ಧರ್ಮ. ಇವೆರಡೂ ಮಾನವನಿಗೆ ಆಂತರಿಕ ಶಕ್ತಿ ನೀಡುವುದು;ಜೀವನೋತ್ಸಾಹ ತುಂಬುವುದು. ಉತ್ತಮ ಬದುಕಿಗೆ ದಾರಿ ತೋರುವುದು. ಭವಿಷ್ಯಕ್ಕೆ ಹೊಸಬೆಳಕು ಕಾಣಿಸುವುದು. ಆ ಬೆಳಕೇ ಜೀವಜಗತ್ತಿಗೆ ವ್ಯಾಪಕವಾದ ಅರ್ಥವನ್ನೂ ಕಲ್ಪಿಸಿಕೊಟ್ಟಿವೆ. ಅಲ್ಲದೇ ಧಾರ್ಮಿಕತೆಯಲ್ಲಿ ದೇವರನ್ನು ಅರಿಯುವಂತೆ ಮಾಡಿದೆ. ಆದಕಾರಣ, ಮನುಷ್ಯನು ಧರ್ಮಕ್ಕೆ ವಿಶಿಷ್ಟ ಅರ್ಥವನ್ನೇ ಕೊಟ್ಟಿದ್ದಾನೆ.

ಒಳಗೂ ಹೊರಗೂ ಧರ್ಮ ಕರ್ಮದ ಅಂಜಿಕೆ ಇಲ್ಲದಿರುವ ಮನುಷ್ಯನ ಬದುಕಿನಲ್ಲಿ ನಿತ್ಯ ಕೋಲಾಹಲವೇ. ಮನುಷ್ಯ ಧರ್ಮವನ್ನು ನಾನಾ ರೀತಿಯಲ್ಲಿ ಬಳಸಿಕೊಳ್ಳುತ್ತಿದ್ದಾನೆ...! ಎಷ್ಟೋ ವೇಳೆ ಧರ್ಮದ ಹೆಸರಿನಲ್ಲಿ ಮನಸೋ ಇಚ್ಛೆ ನಡೆದುಕೊಳ್ಳುವುದೂ ಅವನ ಬದುಕಿನ ಕರ್ಮವೇ;ವೈಚಿತ್ರ್ಯವೇ ಆಗಿದೆ.

ಜನಾಂಗ ಜನಾಂಗಗಳಲ್ಲಿ ಮತೀಯಧರ್ಮ, ರಾಜಕಾರಣದಲ್ಲಿ ರಾಜಕೀಯಧರ್ಮ,

ಕೋಮುವಾದದಲ್ಲಿ ಮತೀಯಧರ್ಮ. ಬ್ರಾಹ್ಮಣ, ವೀರಶೈವ, ಜೈನ, ಭೌದ್ಧ, ಮುಸ್ಲಿಂ, ಸಿಖ್ ಜನಾಂಗೀಯ ಪದ್ಧತಿಯಲ್ಲಿ ಧರ್ಮವಿದೆ. ಮತೀಯರೆಂಬುದು ಧರ್ಮೀಯರಾಗಿಯೂ, ಧಾರ್ಮಿಕತೆ ಎಂಬುದು ಜಾತಿಯತೆಯಾಗಿಯೂ ಕಾಡುವುದಿದೆ. ಧರ್ಮವು ಜೀವಧರ್ಮವಾದಗಲಷ್ಟೇ ಮನುಷ್ಯ ಮನುಷ್ಯನಾಗುತ್ತಾನೆ. ಮಾನವೀಯತೆಯಲ್ಲಿ ದೈವಿಕತೆ ಮೆರೆಯುತ್ತದೆ.

ಅಂದು ಧರ್ಮ-ಕರ್ಮದ ಅಂಜಿಕೆ ಎಂದರೆ ದೇವರ-ಪಾಪದ ಅಂಜಿಕೆ ಯಾಗಿತ್ತು. ಇಂದಿನ ಆಧುನಿಕ ಜೀವನ ಶೈಲಿಯಲ್ಲಿ ಎಲ್ಲ ವೈಜ್ಞಾನಿಕವೆನಿಸಿದರೇನು! ದೈವಿಕ ಧಾರ್ಮಿಕ ನಂಬಿಕೆಗಳ ಪ್ರಭಾವವಿದ್ದೇ ಇದೆ. ಅಣು ರೇಣು ತೃಣ ಕಾಷ್ಟಗಳಲ್ಲಿ ದೇವಕಣ- ದೇವರ ಅಂಶವಿದೆ ಎಂಬುದು ವೈಜ್ಞಾನಿಕರನ್ನೂ ಬೆರಗು ಗೊಳಿಸಿ ಬಿಟ್ಟಿದೆಯಲ್ಲ...ಆಧ್ಯಾತ್ಮಿಕತೆಯ ಅನುಭಾವದಲ್ಲಿ ಭಗವದ್ಭಕ್ತಿ ಎಂಬುದು ಅಂತರಂಗದ ಶೋಧನೆ. ಅದು ಹೊರಗಿನಿಂದ ಅಲ್ಲ, ನಮ್ಮೊಳಗಿನಿಂದಲೆ ಬರಬೇಕು. ಅದು ತಾಯಿ ಪ್ರೇಮದಿಂದ ಆರಂಭವಾಗಿ ನಮ್ಮ ಕೊನೆಯುಸಿರಿನಲ್ಲಿ ವಿಶ್ವಪ್ರೇಮದಿಂದ ಕೊನೆಗೊಳ್ಳುವುದೆಂಬುದನ್ನೂ ಬಲ್ಲವರೇ ಬಲ್ಲರು! ಅದನ್ನರಿಯದ ಮೌಢ್ಯವೂ ಹೆಚ್ಚುತ್ತಿದೆ. '
ಪಾಪ ಪುಣ್ಯಗಳೆಲ್ಲ ಪುರಾಣಗಳಲ್ಲಿ, ದುಡ್ಡಿದ್ದರೇನೆ ಈ ಪ್ರಪಂಚದಲ್ಲಿ ಎಲ್ಲವೂ..' ಎಂಬ ಹುಂಬತನವೂ ಇದೆ! ಹೀಗಾಗಿ ಧರ್ಮವೆಂದರೇನೆ ಜನಸಾಮಾನ್ಯರಲ್ಲಿ ಎಲ್ಲಿಲ್ಲದ ಗೊಂದಲ. ದೇವರು ಇಲ್ಲ ಎನ್ನುವ ಗುಂಪು ಎಲ್ಲಿಲ್ಲ...? ಅದು ಹೇಗೆ ಬೆಳೆದರೂ ಎಂದಿಗೂ ಅಲ್ಪಸಂಖ್ಯೆಯಲ್ಲಿರುತ್ತದೆ. ದೇವರಿಲ್ಲ ಎನ್ನುವವರೂ ದೈವಿಕತೆ ಬಗ್ಗೆ ಮಾತಾಡುವವರಿದ್ದಾರೆ! ದೇವರಿಲ್ಲದ ಧಾರ್ಮಿಕತೆ ಇಲ್ಲದ ದೈವಿಕತೆ ಉಂಟೇ...? ಹಾಗೂ ಮಾನವೀಯತೆ ಇಲ್ಲದ ಧಾರ್ಮಿಕತೆ ಇದೆಯೇ...? ಧರ್ಮ ಎಂಬುದು ಕೇವಲ ಜಾತಿ ಮತೀಯ ಸಂಪ್ರದಾಯಗಳಿಗಷ್ಟೇ ಸೀಮಿತವೇ....? ಅಷ್ಟಕ್ಕೂ ಸಂಪ್ರದಾಯಗಳೆಂದರೆ ಆಯಾ ಜನಾಂಗೀಯ ಜಾತಿ ಪದ್ಧತಿಗಳಲ್ಲಿರುವ ಆಚಾರ ವಿಚಾರಗಳು. ಅವು ಕೆಲವೆಡೆ ವಿಚಿತ್ರವೆನಿಸಿದರೂ ಜೀವಧರ್ಮ ವೆಂಬುದು ಎಲ್ಲರಿಗೂ ಒಂದೇ ಅಲ್ಲವೇ...?
ಧರ್ಮ ಎಂಬ ಪದಕ್ಕೆ ಬೇರೆ ಬೇರೆ ಸಂದರ್ಭಗಳಲ್ಲಿ ಕಾಣುವಷ್ಟು ಬೇರೆ ಬೇರೆ ಅರ್ಥಗಳನ್ನು ಇನ್ಯಾವ ಪದಕ್ಕೂ ಕಾಣಲಾರೆವು. ಭಾರತ ವಿಚಿತ್ರ ವಿರೋಧಾಭಾಸಗಳ ದೇಶವೆನ್ನುತ್ತಾರೆ. ಆದರೇನು! ಭಾರತದ ಆತ್ಮವೇ ಆಧ್ಯಾತ್ಮ. ಮಾನವನ ಜೀವಧರ್ಮವನ್ನಲ್ಲದೇ ಅದು ತಿಳಿಸದಿರುವ ವಿಚಾರಗಳಿಲ್ಲ. ಭಕ್ತಿ ಜ್ಞಾನ-ವೈರಾಗ್ಯಗಳಿಲ್ಲ, ನಡೆನುಡಿಗಳಿಲ್ಲ. ಹಾಗೆನೋಡಿದರೆ ಆತ್ಮ ಇಲ್ಲ ಎನ್ನುವ ಪಂಥದವರಿಗೂ ಆಧ್ಯಾತ್ಮವು ಪರಮಾಪ್ತವೆನಿಸಿದೆಯಲ್ಲ...

ತಿರುಪತಿ ತಿರುಮಲೆ ಪುಣ್ಯಕ್ಷೇತ್ರ
ವೇದೋಪನಿಷತ್ತು,ಮತ್ತು ರಾಮಾಯಣ, ಮಹಾಭಾರತ ಮಹಾಕಾವ್ಯಗಳನ್ನಲ್ಲದೇ ಅನೇಕ ಸ್ಥಳ ಪುರಾಣ ಕಥೆಗಳನ್ನೇ ನೀಡಿದಂತಹ ಪುಣ್ಯಭೂಮಿ ನಮ್ಮದು. ಪುಣ್ಯಕ್ಷೇತ್ರವೊಂದರ ಕಥೆ ಎಂದರೆ ಭಕ್ತರಿಗೆ ಭಾವುಕರಿಗಷ್ಟೇ, ಅವುಗಳಲ್ಲಿ ಎಲ್ಲಕಾಲಕ್ಕೂ ಪ್ರಸ್ತುತವೆನಿಸುವ ಜೀವನ ಮೌಲ್ಯಗಳು ಇರುವುದು ವಿರಳವೇ, ಅದೊಂದು ಕೋಮಿನ-ಧರ್ಮೀಯರಿಗೆ ಸೀಮಿತವೆಂಬ ಭಾವನೆಯೇ. ಆದರೇನು! ಶತಶತಮಾನಗಳಿಂದ ಎಲ್ಲ ಜನಾಂಗಗಳ ಕೋಮುಗಳ ಧರ್ಮಿಯರನ್ನು ಆಕರ್ಷಿಸುತ್ತಿದೆ ತಿರುಪತಿ ತಿರುಮಲ ಪುಣ್ಯಕ್ಷೇತ್ರ!

ತಿರುಮಲೇಶನ ಸತ್ವಗುಣದ ಹಿರಿಮೆ, ವಿಶ್ವಕಲ್ಯಾಣ ಕಥೆಗಿಂತ ಅವನ ಸಿರಿ ಸಂಪತ್ತು, ವೈಭವ, ಮಹಾತ್ಮೆಗಳೇ ಹೆಚ್ಚು ಜನಜನಿತವಾಗಿವೆ. ಶ್ರೀರಾಮ, ಶ್ರೀಕೃಷ್ಣನಂತೇ ಶ್ರೀನಿವಾಸನೂ ಶ್ರೀವೆಂಕಟೇಶ್ವರನಾಗಿ ಪೂಜೆಗೊಳ್ಳುತ್ತಿರುವನಾದರೂ, ನಿತ್ಯವೂ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತಜನರನ್ನು ಆಕರ್ಷಿಸುತ್ತಿರುವ ಜಗತ್ಪ್ರಸಿದ್ಧನು. ಅವನ ಕಲ್ಯಾಣದಲ್ಲಿ ಲೋಕೋತ್ತರವಾದ ಸಾರ್ವಕಾಲಿಕ ಜೀವನ ಮೌಲ್ಯಗಳಿವೆಯೇ ಎಂಬುದನ್ನು ಅಭ್ಯಸಿಸಿ ನೋಡುವ ಪ್ರಯತ್ನಗಳೇಕೆ ನಡೆದಿಲ್ಲ....? ಅವನ ಬಗ್ಗೆ ವಾದ ವಿವಾದಗಳಿಗೂ ಕೊನೆ ಮೊದಲಿಲ್ಲವಲ್ಲ....?


ನೀವು ವೆಂಕಟೇಶ ಪುರಾಣ ಕಥೆ ಓದಿರಬಹುದು. ಶ್ರೀನಿವಾಸ ಕಲ್ಯಾಣ ಸಿನಿಮಾ ನೋಡಿರಬಹುದು. ಆ ದೇವ ದೇವನ ಒಡವೆ ವಜ್ಯವೈಢೂರ್ಯ ಮತ್ತು ಕಲ್ಯಾಣ ವೈಭವ ಕಂಡು ಬೆರಗಾಗಿರಬಹುದು. ಸಂಕಟ ಕಳೆವ ವೆಂಕಟ ರಮಣನವನು, ಅನನ್ಯ ಭಕ್ತಿಭಾವದಿಂದ ಹರಕೆ ಹೊತ್ತರೆ ಸಾಕು, ಸಕಲ ಇಷ್ಟಾರ್ಥಗಳನ್ನೂ ನೆರವೇರಿಸುವನು ಎಂಬ ನಂಬಿಕೆಯೆ ಬಹಳವಿದೆ. ಅದಕ್ಕೇ ತಿರುಪತಿ ತಿರುಮಲೇಶನ ಪುಣ್ಯಕ್ಷೇತ್ರವಾದ ತಿರುಪತಿಗೆ, ಪ್ರಪಂಚದ ಎಲ್ಲ ಕಡೆಯಿಂದ ಜನ ಬರುತ್ತಾರೆ ಎಂದೇ ತಿಳಿದಿದ್ದೇವಷ್ಟೇ. ಆದರೆ, ಹಾಗೆ ದಿನ ನಿತ್ಯವೂ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಜನರನ್ನು ಆಕರ್ಷಿಸುತ್ತಿರುವ ಶ್ರೀ ತಿರುಮಲೇಶ ಶ್ರೀನಿವಾಸನ ಕಲ್ಯಾಣ ಕಥೆಯಲ್ಲೇ ಸ್ವಾರಸ್ಯಕರವಾದ ನಿತ್ಯ ಜೀವನಕ್ಕೆ ಹತ್ತಿರವಾದ ತ್ರಿಗುಣಾತ್ಮಕ ತತ್ವವಿದೆ, ಮುಂದುವರೆದ ಅತ್ಯಾಧುನಿಕ ಪ್ರಪಂಚದಲ್ಲೂ ನಮ್ಮನ್ನು ಚಕಿತರನ್ನಾಗಿಸುವ ಹಾಗೂ ವಿಚಾರಪರರನ್ನಾಗಿಸುವ ಚಿಂತನೆಗಳಿವೆ. ಬದುಕಿನಲ್ಲಿ ಅನುಸರಣೆಗೆ ಉಪಯುಕ್ತವಾದ ಜೀವನ ಮೌಲ್ಯಗಳಿವೆ ಎಂಬುದನ್ನು ಯಾರೂ ತಿಳಿಯುವ ಗೋಜಿಗೆ ಹೊಂದಂತಿಲ್ಲ.. ಪ್ರಾಯಶಃ ತಿಳಿಯಲು ಪ್ರಯತ್ನಗಳೇ ನಡೆದಿಲ್ಲವೆನ್ನಿ...


ತಿರುಪತಿ ತಿಮ್ಮಪ್ಪನೆಂದರೇ ದುಡ್ಡಿಗೆ ಕೈ ಚಾಚಿ ನಿಂತ ದೇವರು! ಶ್ರೀಮಂತರಿಗಷ್ಟೇ ದೇವರು! ಹರಕೆ ಹೊತ್ತರೆ ಸಾಕು ನಿಮ್ಮ ಬಯಕೆ ತೀರುತ್ತವೆಂಬುದಷ್ಟೇ ಅಲ್ಲ; ಅವನ ಕಲ್ಯಾಣ ಕಥೆಯಲ್ಲಿ ಒಳ ಹೊಕ್ಕು ನೋಡ ಬನ್ನಿ, ಅದು ನಿಮಗೆ ಕೊಡುವ ಶಾಂತಿ ಸಮಾಧಾನ ನಿಮಗೇ ಆಶ್ಚರ್ಯವೆನಿಸುತ್ತದೆ. ಹಾಗೆ ಮೇಲ್ನೋಟಕ್ಕೆ, ಇದು ನಿರ್ದಯಿ ಪ್ರಪಂಚ ಇಲ್ಲಿ ದುಡ್ಡಿದ್ದರಷ್ಟೇ ಎಲ್ಲವೂ ಎನಿಸುತ್ತದೆ. ನಾವು ಈ ಪ್ರಪಂಚದ ಸರಿಯಾಗಿ ಅರ್ಥಮಾಡಿಕೊಳ್ಳಬೇಕಷ್ಟೇ. ಇಲ್ಲಿ ಏನೆಲ್ಲವನ್ನೂ ಎದುರಿಸುವ ಶಕ್ತಿ ವಾಸ್ತವಿಕತೆ, ವೈಜ್ಞಾನಿಕತೆ ಹಾಗೂ ತಾತ್ವಿಕತೆಯಲ್ಲಿದೆ. ದ್ವಾಪರ ಯುಗದಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಉಪದೇಶಿಸಿದ ಭಗವದ್ಗೀತೆಯಲ್ಲೂ ತ್ರಿಗುಣಾತ್ಮಕ ತತ್ವವಿಚಾರವಿದೆ. ಈ ಕಲಿಯುಗಾರಂಭ ಕಾಲದಲ್ಲಿ ನಡೆದ ತಿರುಮಲೇಶ ಶ್ರೀನಿವಾಸನ ಕಲ್ಯಾಣ ಕಥೆಯು ವಿಶಿಷ್ಟ ರೀತಿಯಲ್ಲಿ ಈ ಪ್ರಪಂಚದ ತ್ರಿಗುಣಾತ್ಮಕ ತತ್ವವನ್ನು ನಮ್ಮ ಮುಂದೆ ತೆರೆದಿಡುತ್ತದೆ.



ಇಂದಿನ ಮಾಹಿತಿ ಯುಗದ ವೇಗಗತಿಯನ್ನು ಅದರ ಕೃತ್ರಿಮತೆಯನ್ನೂ ಮೀರಿದ ಅಲೌಕಿಕತೆ ಅಖಂಡತೆಯ ಬ್ರಹ್ಮಸ್ವವೂ, ಹಾಗೂ ವೇದಾಂತದ ಪ್ರಕಾರ

"ತತ್ವಂ ಅಸಿ'' ಅದು ನೀನೆ ಎಂಬುದೂ ವೈಜ್ಞಾನಿಕ ಸತ್ಯವೇ. ಅದು ಸರ್ವಗೋಚರವಾದ ಅಗೋಚರ ಶಕ್ತಿಯೇ, ಆ ಶಕ್ತಿಯೇ ಉಲಿದು ಧ್ವನಿಸಿದಂತೇ ನಿರೂಪಿಸಿರುವ ಹೃದಯ ದೀಪ್ತಿಯಲಿ ನೀವೂ ಒಳಗೊಂಡು ಬರಬೇಕು. ಇದು ವ್ಯವಹಾರಿಕವಾದ ಯಾವುದೋ ದೃಶ್ಯಮಾಧ್ಯಮದ ಸೆಳೆಮಿಂಚಲ್ಲ...! ಆ ವಿಶ್ವಚೇತನವೇ ತಾನಾಗಿ ಅನುರಣಿಸಿದ ಸತ್ಯಸ್ಯಸತ್ಯ!! ನಮ್ಮೊಳಗಣ ಆಂತರ್ಯಕ್ಕೆ ಬೆಳಕು ಕಾಣಿಸುವ ನವನವೋನ್ಮೇಷಶಾಲೀ ಜೀವಪರ ಚಿಂತನ ರಶ್ಮಿ!

(ತಿರುಮಲೇಶನ ತ್ರಿಗುಣಾತ್ಮಕ ಪ್ರಪಂಚದ ಪೀಠಿಕೆ-ಅವತರಣಿಕೆಯಿಂದ) 

No comments: