Monday, March 11, 2013

ಶ್ರೀ ತಿರುಮಲೇಶನ ತ್ರಿಗುಣಾತ್ಮಕ ಪ್ರಪಂಚ

ಈ ಭೂಗೋಳದಲ್ಲಿ ಮೂರನೇ ಒಂದು ಭಾಗ ಮಾತ್ರ ನಾವು ವಾಸಿಸಲು ಯೋಗ್ಯವಾದ ಭೂಭಾಗವಿದೆ. ಪಂಚಭೂತಗಳಿಂದಾದ ಮನುಷ್ಯನ ಶರೀರವೂ ಎರಡು ಭಾಗ ನೀರು, ಒಂದು ಭಾಗವಷ್ಟೇ ಮೂಳೆ ಮಾಂಸಗಳಿಂದಾಗಿದೆ. ಅಚ್ಚರಿಯೆಂದರೆ, ನಮ್ಮ ಭಾರತ ಭೂ ಪ್ರದೇಶವೂ ಮೂರು ದಿಕ್ಕುಗಳಿಂದ ಸುತ್ತುವರಿದ ನೀರು, ಒಂದೇ ದಿಕ್ಕಿನ ಭೂಭಾಗ ಹೊಂದಿರುವ ಪರ್ಯಾಯ ದ್ವೀಪ. ವಿಶ್ವದ ಯಾವುದೇ ಭೂಭಾಗವೂ ಮೇಲ್ನೂಟಕ್ಕೆ ಸೌಮ್ಯ! ಅಷ್ಟೇ ಒಡಲೊಳಗೆ ರುಧ್ರ ಗಂಭೀರ! ಕೆಲವೇಳೆ ಎಲ್ಲೋ ಭಯಾನಕ ಭೂಕಂಪನ!! ಸುತ್ತುವರಿದ ಸಮುದ್ರವೂ ಅಲೆಗಳೇರಿಳಿತದಲಿ ಸೌಮ್ಯ! ಇದ್ದಕ್ಕಿದ್ದಂತೆ ಬಿರುಗಾಳಿ ಹೊಡೆತ. ಸುನಾಮಿಯ ಅನಾಹುತ! ನಿತ್ಯ ಜೀವನದಲ್ಲಿ ಪ್ರಶಾಂತತೆ!!

ಆದರೇನು! ಆಧುನಿಕತೆಯ ಅಬ್ಬರದಲ್ಲಿ ಪರಿಸರ ಮಾಲಿನ್ಯ, ಶಬ್ದಮಾಲಿನ್ಯ, ಜನವಾಹನಗಳ ದಟ್ಟಣೆ. ಮರಗಳನ್ನು ಕಡಿದಂತೆಲ್ಲ ಅಂತರ್ಜಲ ಇಂಗಿಸುತ್ತಲೆ ಮೆರೆದ ಕಾಂಕ್ರೀಟ್ ರಸ್ತೆಗಳು, ಕಟ್ಟಡಗಳು, ಹೊಲಬುಗೆಟ್ಟ ಗುಂಡಿ ಗಟಾರಗಳು, ಜನಸಂಖ್ಯಾಸ್ಫೋಟದಲಿ ನಿತ್ಯ ಗಲಭೆ ಗದ್ದಲಗಳು. ಏನೀ ಅವ್ಯವಸ್ಥೆಯೋ ಬೇಸರ ತರಿಸುತ್ತದೆ. ಮೇಲೆ ನೋಡೆ ಕಣ್ಣಿಗೆ ರಾಚುವ ಮಹಲುಗಳು, ಕೆಳಗೆ ದಟ್ಟದಾರಿದ್ರ್ಯಕ್ಕೆ ಒಸರುವ ಕಂಬನಿ. ಮಾತನಾಡಿಸಿದರೂ ಕೊಂಕು ನುಡಿವ ನಮ್ಮವರು. ಮಾತಿಲ್ಲದ ಪರಕೀಯರು. ಇವರೆಲ್ಲರ ನಡುವೆಯೆ ಸ್ವಾರ್ಥಿಗಳು, ನಯವಂಚಕರು, ದುಷ್ಟರು ಭ್ರಷ್ಟರು, ಭಯೋತ್ಪಾದಕರು, ಕಳ್ಳಕಾಕರು ಎಲ್ಲೆಲ್ಲೂ ಕೆಟ್ಟದ್ದೇ ಹೆಚ್ಚು ಎದ್ದು ತೋರುತ್ತದೆಯಲ್ಲ...!

ಇಲ್ಲ ಇಲ್ಲ! ಇದು ಸಾತ್ವಿಕ ಸಜ್ಜನರೂ ಸದ್ದುಗದ್ದಲವಿಲ್ಲದೇನೆ ಅವರಷ್ಟಕ್ಕೆ ಅವರು ಇರುವ ಕಾಲ. ಧಾರ್ಮಿಕತೆ ಪ್ರಾಮಾಣಿಕತೆ ಮರೆಯದೇ ಪೂರ್ಣ ಮರೆಯಾಗದಿರುವ ಮಾನವೀಯತೆ ಮತ್ತೆ ಮತ್ತೆ ಮೈದೋರುವ ದೈವಿಕತೆಯ ಕಾಲವೂ ಹೌದಲ್ಲವೇ..!. ಅಂತೆಯೇ ಇವೆಲ್ಲವೂ ಸೇರಿ ಪ್ರಾಕೃತಿಕ-ಭೌತಿಕ ಜೈವಿಕವೂ ಆದ ಈ ಪ್ರಪಂಚವೆಲ್ಲ ತ್ರಿಗುಣಮಯ!! ದಿನಂ ಪ್ರತಿ ವೈಜ್ಞಾನಿಕತೆಯಲ್ಲಿ ಎಷ್ಟೊಂದು ಹಗುರಮಯವೀ ಜೀವಿತಕಾಲ! ಅಷ್ಟೇ ನಿರಾಳ ಉಸಿರೆಳೆಯವಂತಲ್ಲ, ಹಸಿವು ತೀರಿಸಿಕೊಳ್ಳಲು ವಾತಾವರಣದಲ್ಲಿ ಇರಲೇಬೇಕಾದುದೆಲ್ಲ ಆಗುತ್ತಿರುವುದೇ ಮಂಗಮಾಯ!!
ಹದಿನೈದನೇ ಶತಮಾನದಲ್ಲೇ ಹರಿದಾಸರು ಹೇಳಿದರು-“ಪರಮ ಪಾಪಿಗಳಿಗಿದು ಸುಭಿಕ್ಷ ಕಾಲ. ಸತ್ಯವಂತರಿಗಿದು ಕಾಲವಲ್ಲ...” ಅಂದರೆ, ಸತ್ಯವಂತರಿಲ್ಲದ ಪ್ರಪಂಚವೆಲ್ಲಿದ್ದೀತು! ಪ್ರಪಂಚದೆಲ್ಲೆಡೆ ಉಚ್ಚಸಂಸ್ಕೃತಿ ಲಕ್ಷಣಗಳಿರುವಂತೆಯೆ ಅಷ್ಟೇ ಲಜ್ವೆಗೆಟ್ಟ ನೀಚಲಕ್ಷಣಗಳೂ ಕಾಣಸಿಗುತ್ತವೆ. ನಿರ್ದಯಿ ಪ್ರಪಂಚವಿದೆನಿಸುತ್ತದೆ. ಆದಿಯಿಂದ ಮಾನವನ ಸಂಸ್ಕೃತಿ ಪರಂಪರೆಯಲ್ಲಿ ನಮ್ಮ ಭಾರತಕ್ಕೇ ಅದರದೇ ವಿಶಿಷ್ಟ ಸ್ಥಾನ ಮಹತ್ವವಿದೆ. ಪ್ರಪಂಚದ ಅತಿ ಹೆಚ್ಚು ಜನಸಂಖ್ಯೆಯಲ್ಲಿ ಎರಡನೇ ಸ್ಥಾನ ಪಡೆದಿದೆ. ಜನಸಂಖ್ಯೆ ಹೆಚ್ಚಿದಂತೆಲ್ಲ ಕೆಟ್ಟದ್ದೆಂಬುದೇ ಅಣಕವಾಡುವಂತಿದೆ....
ಇಷ್ಟಕ್ಕೂ ವಿಶ್ವಸೃಷ್ಟಿಯಲಿ ತೃಣಕ್ಕಿಂತ ಕಡೆಯಾದುದಿದೆ. ಅಣವೂ ಇದೆ. ಮಹತ್ತೂ ಇದೆ. ಮಹತ್ಸಾಧನೆಗಳಿವೆ. ಮನುಷ್ಯನಿಗೆ ‘ಮಹತ್ತು’ ಎಂಬುದರಿಂದ ಹುಟ್ಟುತ್ತದೆ ಅಹಂಕಾರ ವ್ಯಾಖ್ಯೆ! ಅಹಂಮಿಕೆಯೇ ಅವನ ಮನಸ್ಸಿನ ಎಲ್ಲ ಕ್ರಿಯೆಗಳಿಗೆ ಮೂಲ. ಅವುಗಳೇ ತ್ರಿಗುಣ ಮಯ. ಸತ್ವ, ರಾಜಸ, ತಾಮಸ ಎಂದು. ಇವು ಮೂರೂ ಗುಣಗಳ ಸಮತೋಲನವು ಈ ಪ್ರಾಕೃತಿಕ ಭೌತಿಕ ಪ್ರಪಂಚದಲ್ಲಿ, ಅವುಗಳೊಂದಿಗೇ ಇದ್ದು ಪ್ರತ್ಯೇಕವೆನಿಸುವ ಸತ್ವಗುಣದ ಹಿರಿಮೆಯಿಂದ. ಸತ್ ಶಕ್ತಿಯಲ್ಲಿ ಸೌಮ್ಯತೆ, ಸ್ಥಿತಪ್ರಜ್ಞೆ ಸಮಸ್ಥಿತಿಯಿಂದ.

ರಜೋಗುಣವೆಂದರೆ ಕೋಪ, ತಾಪ, ಆಕ್ರೋಶ ರೋಷ. ತಮೋಗುಣವೆಂದರೆ ಆಲಸ್ಯ ಅಂಧಕಾರ, ಅಧರ್ಮ, ಹಿಂಸೆ, ವಂಚನೆ, ಕ್ರಾರ್ಯ. ಈ ತ್ರಿಗುಣ - ಸ್ವಭಾವಗಳನ್ನು ಮನುಷ್ಯರಲ್ಲಿ, ಪ್ರಾಣಿಗಳಲ್ಲಿ, ಸಸ್ಯಗಳಲ್ಲಿ, ಜಲಚರಗಳಲ್ಲಿ ಕಾಣಬಹದಾಗಿದೆ.

-ಹೀಗೆ ಜೈವಿಕಜಗತ್ತಿನ ಜೀವನ ಜಲಧಿಯಲ್ಲಿ ಪ್ರಾಣಿಗಳು ಜಂತುಗಳಲ್ಲಿ, ಮನುಷ್ಯರಲ್ಲಿ ಕೆಟ್ಟದ್ದೆಂಬುದರ ಪ್ರಮಾಣವೇ ಎಲ್ಲಕಾಲಕ್ಕೂ ಎರಡರಷ್ಟು ಗೋಚರಿಸುತ್ತಿರುತ್ತದೆ. ಉಳಿದೊಂದು ಅಂಶವಷ್ಟೇ ಒಳ್ಳೆಯದೆಂಬುದಿರುತ್ತದೆ.

ಆದುದರಿಂದ, ಈ ಎರಡರಷ್ಟು ಜಲಾವೃತ ಜಗತ್ತಿನಲ್ಲಿ, ಒಂದು ಭಾಗವಷ್ಟೇ ಇರುವ ಭೂಭಾಗದಲ್ಲಿ ಮತ್ತೆ ಎರಡು ಭಾಗದಷ್ಟು ರಜೋಗುಣ ತಮೋಗುಣದ ಜನರೇ ಇರುತ್ತಾರೆ. ಅವರಲ್ಲಿ ತಾಮಸಿಗಳಾದವರಲ್ಲಿ ಪರಮಪಾಪಿಗಳೇ ಹೆಚ್ಚಿರುವುದೂ ಕಾಣಸಿಗುತ್ತದೆ. ಹಾಗೂ ಎಲ್ಲ ಕಾಲಕ್ಕೂ ಪಾಪಿಗಳ ಸಂಖ್ಯೆ ಅಧಿಕ ಪ್ರಮಾಣದ ಏರಿಕೆಯಲ್ಲೇ ಇರುತ್ತದೆ.

ಆದರೂ 1/3 ಭಾಗದಷ್ಟು ಸಾತ್ವಿಕ ಸಜ್ಜನರು ಇದ್ದೇ ಇರುತ್ತಾರೆಂಬುದು ಕಂಡುಬರುತ್ತದೆ. ಇದೇ ಪ್ರಾಕೃತಿಕ ನಿಯಮಾನುಸಾರವೂ ಜಗದ ಅಸ್ತಿತ್ವಕ್ಕೆ ಕಾರಣೀಭೂತವಾಗಿಯೂ ಇರುವುದೆಂಬುದು ವೈಜ್ಞಾನಿಕವಾಗಿಯೂ ದೃಢಪಟ್ಟಿದೆ.

ಯಾಕೆಂದರೆ, ಯಾವಾಗಲೂ ನೀರಿನ ಅಂಶವು ಹೆಚ್ಚಿದ್ದರೇನೆ ಭೂಭಾಗವು ಹಸನಾಗಿ ಫಲವತ್ತಾಗಿರುವುದು. ಇದು ನಮ್ಮ ಶರೀರಕ್ಕೂ ಅನ್ವಯಿಸುತ್ತದೆ. ಆದರೆ, ಆ ನೀರಿನ ಅಂಶವೇ ಪ್ರಳಯ ಪ್ರಕೋಪಕ್ಕೆ ಹೋಗಬಾರದಲ್ಲ....?

ಅತಿಶಯವೆಂದರೆ, ಇಲ್ಲಿ ಒಬ್ಬ ಸಭ್ಯನಾಗಿ ಸಾತ್ವಿಕನಾದರೆ ಸಾಕು, ತಟ್ಟನೆ ಇಬ್ಬರು ದುಷ್ಟರು ದುರ್ಮಾರ್ಗಿಗಳು ಹುಟ್ಟಿಕೊಳ್ಳುತ್ತಾರೆ. ಹಾಗೆಯೇ, ಒಬ್ಬ ಸಾತ್ವಿಕ ಹಾಗೂ ಸತ್ ಸಾಧಕ ಸತ್ತ ಕ್ಷಣದಲ್ಲೇ ಇನ್ನೊಬ್ಬ ಸಾತ್ವಿಕ ಸಾಧಕ ಮಹಾನುಭಾವನು ಸೂರ್ಯನಂತೆಯೆ ಉದಯಿಸಿ ಬರುತ್ತಾನೆಂಬುದು ತಾತ್ವಿಕವೆನಿಸಿದರೂ ವಾಸ್ತವಿಕ ಸಂಗತಿಯೇ. ಇದು ತ್ರಿಗುಣಾತ್ಮಕ ಪ್ರಪಂಚದ ನಿಗೂಢ ಸತ್ಯವೇ. ಪ್ರಶ್ನಾತೀತವೇ.
ಅಂತೆಯೇ, ಸತ್ವ, ರಜಸ್ಸು, ತಮಸ್ಸು ಈ ತ್ರಿಶಕ್ತಿಗಳು ಅವ್ಯಕ್ತ ಚೇತನದಲ್ಲಿ ನಿಯಂತ್ರಣಕ್ಕೊಳಪಟ್ಟಿರುತ್ತವೆ. ಅಲ್ಲದೇ ಅಷ್ಟೇ ಸಪ್ರಮಾಣಬದ್ಧ ಸಮತೋಲನದಲ್ಲಿರುತ್ತವೆ. ಅವುಗಳಲ್ಲಿ ಸತ್ ಶಕ್ತಿಯು ಒಂದಂಶವಷ್ಟೇ ಆದರೂ ಅದು ಕ್ಷಯಿಸಿ ಹೋಗಬಾರದು. ಹಾಗಾಗುವುದೆಂದರೆ, ಧರ್ಮವೇ ಕ್ಷಯಿಸಿ ಹೋದಂತೆಯೆ. “ದಿನಂಪ್ರತಿ ಸೂರ್ಯನ ಅಸ್ತಮಾನಕ್ಕೆ ಧರ್ಮವೇ ಕಾರಣ” ಎಂಬುದು ಮಹಾಭಾರತದಲ್ಲಿ ಯಕ್ಷಪ್ರಶ್ನೆಗೆ ಧರ್ಮರಾಜನ ಉತ್ತರ. ಹೌದು, ಸೂರ್ಯ ಅಸ್ತಗಂತನಾಗಿಲ್ಲವೆಂದರೆ ಭೂಮಿ ತನ್ನ ಅಕ್ಷದಲ್ಲಿ ತಿರುಗುವುದನ್ನೇ ನಿಲ್ಲಿಸಿದಂತೇ. ಗ್ರಹಗಳ ಚಲನೆ ನಿಶ್ಚೇಷ್ಟಿತಗೊಂಡಂತೆಯೇ. ಅವುಗಳ ಪರಿಭ್ರಮಣೆಯೆ ತಟಸ್ತವಾದಂತೆಯೆ; ಧರೆಧಗಧಗಿಸುವುದೇ...

"ತ್ರಿಗುಣಾತ್ಮಕ ಪ್ರಪಂಚ"

-ಇದು ನನ್ನ ಇತ್ತೀಚಿನ ಪ್ರಕಟಿತ ಕೃತಿ. ತಿರುಪತಿ ತಿರುಮಲೇಶ ಶ್ರೀ ವೆಂಕಟೇಶ್ವರನ ಬಗ್ಗೆ ಕಳೆದ 15 ವರುಷಗಳಿಂದ ಅಧ್ಯಯನ ನಡೆಸಿ ಇದೀಗ ಮೂರನೆಯ ಬಾರಿಗೆ ಒಂದು ವರೆ ವರ್ಷದಲ್ಲಿ ಸಿದ್ಧಪಡಿಸಿ ಪ್ರಕಟಿಸಿದ ಕೃತಿ ಇದು. ಮೊದಲು “ಸಪ್ತಗಿರಿ ಸಂಪದ” 1997 ರಲ್ಲಿ,
ನಂತರ ಇಂಗ್ಲೀಷ್ ನಲ್ಲಿ-
“The Message from Seven Hills”

ಇನ್ನಷ್ಟು ಸಮಕಾಲೀನ ಮೌಲ್ಯಗಳೊಡನೆ ಇತ್ತೀಚಿನ ಪುನಾರಚನೆಯ ಪ್ರಕಟಣೆಯೇ

“ಶ್ರೀ ತಿರುಮಲೇಶನ ತ್ರಿಗುಣಾತ್ಮಕ ಪ್ರಪಂಚ”

ಹೌದು, ಇದು ಆ ಸೃಷ್ಟಿಕರ್ತನ ತ್ರಿಗುಣಾತ್ಮಕ ಪ್ರಪಂಚ!. ತ್ರಿಗುಣಗಳೆಂದರೆ,

ಸತ್ವ, ರಜಸ್ಸು, ತಮಸ್ಸು ಎಂಬ ಮೂರು ಗುಣಗಳು. ಪ್ರಾಕೃತಿಕ, ಭೌತಿಕ ಮತ್ತು ಜೈವಿಕವೂ ಆದ ಸೃಷ್ಟಿಕರ್ತನ ಈ ಪ್ರಪಂಚವೆಲ್ಲ ತ್ರಿಗುಣಮಯ. ಪ್ರಾಕೃತಿಕವಾಗಿ ಭೂ, ಜಲ, ಜೈವಿಕವಾಗಿ ಪ್ರಾಣಿಗಳಲ್ಲಿ ಈ ಮೂರೂ ಗುಣಗಳ ಪ್ರಭಾವ ಪರಿಣಾಮಗಳು ಇರುವುದೇ. ಅವುಗಳಲ್ಲಿ ರಜೋಗುಣ, ತಮೋಗುಣಗಳಿಂದ ಎಲ್ಲ ಕಾಲಕ್ಕೂ ಕೆಟ್ಟದ್ದೇ ಹೆಚ್ಚೆಂದು ತೋರುವ ಸತ್ವಗುಣಗಳಿಂದ ಒಳಿತಿಗೇ ಹಾಗೂ ಸತ್ ಶಕ್ತಿಗೇ ಅತ್ಯಂತ ಮಹತ್ವವಿರುವ ಚಿತ್ರ, ವಿಚಿತ್ರ ಪ್ರಪಂಚವಿದು. ಇಲ್ಲೆಲ್ಲಿದೆ ಸತ್ವಗುಣ, ಸನ್ನಡತೆ ಸತ್ ಶಕ್ತಿಗೆ ಪ್ರಾಧಾನ್ಯತೆ? ದೇವರು, ಧರ್ಮ, ಸಂಸ್ಕೃತಿ, ಸಂಸ್ಕಾರ ಮತ್ತು ಜ್ಞಾನಸಂಸ್ಕರಣೆ, ಪೂರ್ವಜನ್ಮ, ಪಾಪಪುಣ್ಯ, ಕರ್ಮಫಲ, ಪ್ರಾರಬ್ಧಗಳು ಇವೆಲ್ಲ ಉಂಟೇ...?


ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ತ್ರಿಗುಣಗಳ ಬಗ್ಗೆ ಹೇಳಿದ್ದಾನೆ. ಅದನ್ನು ಕಥಾ ರೂಪದಲ್ಲಿ ಹೇಳುವುದೇ ಶ್ರೀನಿವಾಸ ಕಲ್ಯಾಣ- ಶ್ರೀ ತಿರುಮಲೇಶನ ತ್ರಿಗುಣಾತ್ಮಕ ಪ್ರಪಂಚ-


ಜಗತ್ತಿನಲ್ಲಿ ಸಭ್ಯನಾಗಿ, ಸಭ್ಯಗೃಹಸ್ಥನಾಗಿ ಬದುಕುವುದೇ ಮುಖ್ಯವಲ್ಲವೇ...


ಓದಿ  ನೋಡಿ
 ಆಧುನಿಕತೆಯಲ್ಲಿ -ವಿಜ್ಞಾನ ತಂತ್ರಜ್ಞಾನದಲ್ಲಿ ಮುಂದುವರೆದಿರುವ ಈ ಪ್ರಪಂಚದಲ್ಲಿ ಅಚ್ಚರಿ ಎನಿಸುತ್ತ
ನಿಮ್ಮಎಲ್ಲ ಪ್ರಶ್ನೆಗಳಿಗೆ ಉತ್ತರಿಸುವ ಪುಟ ಪುಟಗಳಲ್ಲೂ( 400 ಪುಟಗಳು) ಸತ್ವಗುಣದ ಹಿರಿಮೆ ಗರಿಮೆಯನ್ನೇ ತೋರುವ (ಮೂಲ ಕಥಾ ಸಂವಿಧಾನದಲ್ಲೇ ಪಾತ್ರಗಳ ಸನ್ನಿವೇಶ ಸಂಭಾಷಣೆಯಲ್ಲೇ  ಅಮೂರ್ತವಾಗಿರುವ ಮೌಲ್ಯಗಳನ್ನು ಮೂರ್ತ ಗೊಳಿಸುವ)ದೇವ ದೇವ ಶ್ರೀನಿವಾಸನ ಭವಿಷ್ಯೋತ್ತರ ಪುರಾಣ ಕಥನವೇ


 "ಶ್ರೀ ತಿರುಮಲೇಶನ ತ್ರಿಗುಣಾತ್ಮಕ ಪ್ರಪಂಚ."  "ಸಪ್ತಗಿರಿ ಸಂಪದ" ಪುನಾರಚನೆಯಲ್ಲಿ....

ನೀವು ಹಿಂದೆಂದೂ ಓದಿರದ ವಾಸ್ತವಿಕವಾಗಿ, ವೈಜ್ಞಾನಿಕವಾಗಿ ಹಾಗೂ ತಾತ್ವಿಕವಾಗಿ ಜೀವನ ಮೌಲ್ಯಗಳನ್ನು ಕಟ್ಟಿಕೊಡುವ, ನಿತ್ಯ ನಿರಂತರ ಹೊಸ ಅನುಭವವನ್ನು ನೀಡುವ ಒಂದು ಅಪರೂಪದ ಆಧ್ಯಾತ್ಮಿಕ ಕೃತಿ ಇದು. ವೇಗಗತಿಯಲ್ಲಿ ಮುಂದುವರಿದಿರುವ ಇಂದಿನ ಆಧುನಿಕ ಪ್ರಪಂಚಕ್ಕೆ ಭವಿಷ್ಯೋತ್ತರವಾಗಿ ಹಿಡಿದ ಕೈಗನ್ನಡಿ!